Tuesday, July 28, 2015

ವಕ್ರ ಗೆರೆಗಳ ಜಾದೂ..ಅರುಣ್ ನಂದಗಿರಿ

courtesy: Prajavani

ಅರುಣ ರಾಗ


ಚಾರ್ಲಿ ಚಾಪ್ಲಿನ್ ತಾನು ನೊಂದು ಬೆಂದಿದ್ದರೂ ಅದನ್ನೆಲ್ಲಾ ಬದಿಗೊತ್ತಿ ಜಗತ್ತನ್ನೇ ನಗಿಸುತ್ತಿದ್ದ. ಇದರಂತೆ ಇಲ್ಲೊಬ್ಬ ಅಪ ರೂಪ ಕಲಾವಿದ ತನ್ನ ನೋವನ್ನು ಮನದಲ್ಲೇ ಅಡಗಿಸಿಕೊಂಡು ನಾಡಿನ ಜನರನ್ನು ನಗಿಸುತ್ತಿದ್ದಾನೆ.
ರಾಯಚೂರಿನ ಅರುಣ್ ನಂದಗಿರಿ ಪ್ರಖ್ಯಾತ ವ್ಯಂಗ್ಯಚಿತ್ರಕಾರ. ಇವರ ವ್ಯಂಗ್ಯಚಿತ್ರಗಳು ನಾಡಿನ ಅನೇಕ ಪತ್ರಿಕೆಗಳಲ್ಲಿ, ನಿಯತಕಾಲಿಕೆಗಳಲ್ಲಿ ಪ್ರಕಟವಾಗಿವೆ. ನೀವೂ ನೋಡಿ ನಕ್ಕಿರಬಹುದು. ಆದರೆ ಈ ವ್ಯಂಗ್ಯಚಿತ್ರಕಾರನ ಹಿಂದಿನ ವ್ಯಥೆ ಅನೇಕರಿಗೆ ತಿಳಿದಿರಲಿಕ್ಕಿಲ್ಲ. 34ರ ಹರೆಯದ ಅರುಣ್‌ಗೆ ಹುಟ್ಟಿನಿಂದಲೂ ದೇಹ ಕೃಶಗೊಂಡಿದೆ. ವೈದ್ಯರು ಈ ರೋಗಕ್ಕೆ ಆಸ್ಟ್ರೋಜನಿಟಿಕ್ ಇಂಪರ್ಫೆಕ್ಟ್ ಎನ್ನುತ್ತಾರೆ.
ಇದರಿಂದ ನೋಡಲು ಪುಟ್ಟ ಪಾಪುವಿನಂತೆ ಕಾಣುವ ಈತನ ದೇಹ ಬಹುತೇಕ ಅಂಗವೈಕಲ್ಯತೆಗೆ ತುತ್ತಾಗಿದೆ. ಎಷ್ಟರಮಟ್ಟಿಗೆ ಅಂದರೆ ಅರುಣ್ ನಡೆಯಲಾರ, ಕುಳಿತುಕೊಳ್ಳಲಾರ. ಅಲುಗಾಡದೇ ಒಂದೇ ಕಡೆ ಮಲಗಿದ್ದಲ್ಲಿಯೇ ಮಲಗಬೇಕು, ಈ ಅವಸ್ಥೆಯಲ್ಲಿಯೇ ಎಲ್ಲರನ್ನೂ ನಕ್ಕು ನಲಿಸುವ ವ್ಯಂಗ್ಯಚಿತ್ರಗಳನ್ನು ರಚಿಸುತ್ತಾರೆ.  ಅರುಣ್ ಮಲಗಿದ್ದಲ್ಲಿಯೇ ಮಲಗಿದ್ದರೇನಂತೆ? ಆತನ ವ್ಯಂಗ್ಯಚಿತ್ರಗಳು ಇವರ ಕಾಲುಗಳಾಗಿ ಇಡಿ ನಾಡನ್ನೇ ಸುತ್ತುತ್ತಿವೆ. ಅಂದರೆ ನಾಡಿನ ಬಹುತೇಕ ಎಲ್ಲಾ ಪತ್ರಿಕೆಗಳಲ್ಲಿ ವ್ಯಂಗ್ಯಚಿತ್ರಗಳು ಪ್ರಕಟವಾಗಿವೆ, ಪ್ರಕಟವಾಗುತ್ತಿವೆ. ಈತನ ತಂದೆ-ತಾಯಿ, ಅಣ್ಣಂದಿರು, ಅಕ್ಕಂದಿರು ಈತನಿಗೆ ವಿಶೇಷ ಪ್ರೀತಿ ತೋರಿಸಿ ಅಂಗವಿಕಲತೆಯ ಮನೋಭಾವನೆಯನ್ನೇ ತೊಡೆದು ಹಾಕಿದ್ದಾರೆ. ಸ್ನೇಹಿತರ ನೆರವಿನಿಂದ 'ಅರುಣ್ ಕಂಡ ಪ್ರಪಂಚ' ಎಂಬ ಇವರ ವ್ಯಂಗ್ಯಚಿತ್ರ ಪುಸ್ತಕ ಹೊರಬಂದಿದ್ದು, ಅಂಗವೈಕಲ್ಯತೆಯನ್ನು ಮೆಟ್ಟಿ ನಿಂತ ಇವರ ಪ್ರತಿಭೆ ಕಂಡು ರಾಯಚೂರಿನ ಜಿಲ್ಲಾಡಳಿತ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಿದೆ. ವ್ಯಂಗ್ಯಚಿತ್ರಗಳಷ್ಟೇ ಅಲ್ಲದೆ ರೇಖಾಚಿತ್ರ, ಕವನ, ಇತರೆ ಲೇಖನಗಳನ್ನು ಬರೆಯುವ ಈತನಿಗೆ ಸ್ಥಳೀಯ ಪತ್ರಿಕೆ 'ರಾಯಚೂರ ವಾಣಿ' ಇಪ್ಪತ್ತು ವರ್ಷಗಳ ಹಿಂದೆಯೇ ಅರುಣ್ ನಂದಗಿರಿಯ ಕಲೆಗೆ ವೇದಿಕೆ ನೀಡಿ ಪ್ರೋತ್ಸಾಹಿಸಿದೆ.  ಸಮಯ ಕಳೆಯಲು ಮಲಗಿದ್ದಲ್ಲೇ ಟಿವಿ, ದಿನಪತ್ರಿಕೆ, ಮೊಬೈಲ್ನಲ್ಲಿ ಮಾತನಾಡುತಾನೆ. ತೀರಾ ಸ್ವಾಭಿಮಾನಿಯಾದ ಅರುಣ್ ಅನುಕಂಪ ಬೇಡ ಅವಕಾಶ ಕೊಡಿ. ಅಂಗವೈಕಲ್ಯತೆ ಎನ್ನುವುದು ದೇಹಕ್ಕೆ ಸಂಬಂಧಿಸಿದ್ದು, ಮನಸ್ಸಿಗಲ್ಲ ಎನ್ನುವ ಈತನ ಜೀವನೋತ್ಸಾಹ ಇತರ ಅಂಗವಿಕಲರಿಗೆ ಅಷ್ಟೇ ಅಲ್ಲದೆ ಸಾಮಾನ್ಯ ಜನರಿಗೂ ಮಾದರಿಯಾಗಬೇಕು.

-ಈರಣ್ಣ ಬೆಂಗಾಲಿ
Courtesy: http://www.kannadaprabha.com/supplements/by2coffee/%E0%B2%85%E0%B2%B0%E0%B3%81%E0%B2%A3-%E0%B2%B0%E0%B2%BE%E0%B2%97/223602.html

Selected cartoons of Arun Nandagiri